ಎದೆಗೆ ಬಿದ್ದ ಅಕ್ಷರ
ಗದ್ಯಪಾಠ-
ಎದೆಗೆ ಬಿದ್ದಅಕ್ಷರ
ದೇವನೂರು ಮಹಾದೇವ ಅವರು ಕ್ರಿ. ಶ. 1949 ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನಲ್ಲಿ ಜನಿಸಿದರು. ಇವರು ಎದೆಗೆ ಬಿದ್ದಅಕ್ಷರ, ಕುಸುಮಬಾಲೆ, ದ್ಯಾವನೂರು, ಒಡಲಾಳ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರ 'ಕುಸುಮಬಾಲೆ' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಲಭಿಸಿದೆ.
ಅ] ಒಂದು ವಾಕ್ಯದಲ್ಲಿ ಉತ್ತರಿಸಿ.
1. ಮನೆ ಮಂಚಮ್ಮ ಯಾರು?
ಕವಿ ಸಿದ್ಧಲಿಂಗಯ್ಯ ಅವರು ದೇವನೂರು ಮಹಾದೇವ ಅವರಿಗೆ ಹೇಳಿದ ಕತೆಯಲ್ಲಿನ ಗ್ರಾಮದೇವತೆ ಮನೆ ಮಂಚಮ್ಮ.
2. ಮನೆಮಂಚಮ್ಮನಕತೆ ಹೇಳಿದ ಕವಿ ಯಾರು?
ಮನೆಮಂಚಮ್ಮನ ಕತೆ ಹೇಳಿದ ಕವಿ ಸಿದ್ಧಲಿಂಗಯ್ಯ.
3. 'ಮಲೆಗಳಲ್ಲಿ ಮದುಮಗಳು' ಯಾರು ಬರೆದಕಾದಂಬರಿ?
'ಮಲೆಗಳಲ್ಲಿ ಮದುಮಗಳು' ಕುವೆಂಪು (ಕೆ. ವಿ. ಪುಟ್ಟಪ್ಪ) ಬರೆದ ಕಾದಂಬರಿ.
4. ಅಶೋಕ ಪೈ ಅವರ ವೃತ್ತಿಯಾವುದು?
ಅಶೋಕ ಪೈ ಅವರು ಮನೋವೈದ್ಯರು.
5. ದೇವನೂರರ 'ನನ್ನದೇವರು' ಯಾರೆಂಬುದನ್ನು ಸ್ಪಷ್ಟೀಕರಿಸಿ.
ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನುಇಟ್ಟರೆ ಅದು ದೇವನೂರು ಮಹಾದೇವ ಅವರ ದೇವರಾಗುತ್ತದೆ.
ಆ] ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1. ಅಶೋಕ ಪೈ ಅವರು ಹೇಳಿದ ಸಂಶೋಧನಾ ಸತ್ಯವೇನು?
ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿರುವಾಗ, ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಇನ್ನೊಂದು ಪಕ್ಕದ ಕೊಠಡಿಯಲ್ಲಿ ಏನೋ ಮಾತುಕತೆ ಆಡುತ್ತ ತಮ್ಮಷ್ಟಕ್ಕೆ ತಾವು ಇರುವಾಗ, ಟೆಲಿವಿಷನ್ನಲ್ಲಿ ಯಾವುದಾದರೂ ಕೊಲೆ ದೃಶ್ಯ ಬಂದಾಗ ಇಲ್ಲಿ ಇದನ್ನು ನೋಡುತ್ತಿದ್ದವರ ದುಃಖದ ಭಾವನೆಯು ಇದನ್ನು ನೋಡದೆ ಇರುವ ಪಕ್ಕದ ಕೊಠಡಿಯಲ್ಲಿ ಇರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದೆ. ಅದೇ ಟೆಲಿವಿಷನ್ನಲ್ಲಿ ಯಾವುದಾರೊಂದು ನೃತ್ಯದೃಶ್ಯ ಬಂದಾಗ ಅದನ್ನು
ನೋಡುತ್ತಿರುವವರ ಖುಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದೆ ತಮ್ಮಷ್ಟಕ್ಕೆ ತಾವೇ ಇದ್ದವರ ಮನಸ್ಸಿನ ಮೇಲೂ ಪರಿಣಾಮ ಬೀರಿ ಸ್ವಲ್ಪಮಟ್ಟಿಗೆ ಸಂತೋಷದ ಭಾವನೆ ಉಂಟಾಗುತ್ತದೆ. ಇದು ಅಶೋಕ ಪೈ ಅವರು ಹೇಳಿದ ಸಂಶೋಧನಾ ಸತ್ಯ.
2. 'ವಚನಧರ್ಮ'ದ ಬಗೆಗೆ ದೇವನೂರರ ಅಭಿಪ್ರಾಯ ಏನು?
ಕರ್ನಾಟಕದ ಹನ್ನೆರಡನೆಯ ಶತಮಾನದಲ್ಲಿ ನಡೆದ ವಚನ ಆಂದೋಲನ ಜಗತ್ತಿನಲ್ಲಿ ಎಲ್ಲೂ ನಡೆದಿಲ್ಲ. ಈ ವಚನಧರ್ಮವನ್ನು ಜಾತಿಯ ಬಚ್ಚಲಿನಿಂದ ಮೇಲೆತ್ತಿ ರಕ್ಷಿಸಿದರೆ ಜಗತ್ತಿಗೆ ಇದು ಬೆಳಕಾಗಬಹುದು. ಇದು ಜಾತಿಯಾದರೆ ಕೆಟ್ಟಜಾತಿ; ಧರ್ಮವಾದರೆ
ಮಹೋನ್ನತಧರ್ಮ ಎಂಬುದು 'ವಚನ ಧರ್ಮ'ದ ಬಗೆಗೆ ದೇವನೂರರ ಅಭಿಪ್ರಾಯವಾಗಿದೆ.
3. ಪರಮಹಂಸರ ವ್ಯಕ್ತಿತ್ವದ ವೈಶಿಷ್ಟ್ಯ ಎಂಥದ್ದು?
ಒಂದುದೇಹ ಮನಸ್ಸು ಅದೆಷ್ಟು ಮಾಧ್ಯಮವಾಗಬಹುದೋ ಅದಷ್ಟೂ ಒಂದೇ ದೇಹದಲ್ಲಿ ಸಂಭವಿಸಿದ ಒಂದು ಉದಾಹರಣೆ ಪರಮಹಂಸರದು. ಯಾವುದನ್ನೂ ಕೊಲ್ಲದೆ, ಒಳಿತುಗಳನ್ನೇ ಕೂಡಿಸುತ್ತ ಕೂಡಿಸುತ್ತಾ ಹೋದವರು ಪರಮಹಂಸರು ಎಂಬುದು
ದೇವನೂರು ಮಹಾದೇವ ಅವರ ಅಭಿಪ್ರಾಯವಾಗಿದೆ.
4. ಇಂದಲ್ಲ ನಾಳ ಫಲ ಕೊಡುವ ಅಂಶಗಳಾವುವು?
'ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದಅಕ್ಷರ' ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾಗಿವೆ. ಭೂಮಿಗೆ ಬಿದ್ದ ಬೀಜಕ್ಕೆ ಒಂದಷ್ಟು ನೀರು ಗೊಬ್ಬರ ದೊರೆತರೆ ಅದು ಖಂಡಿತಾ ಚಿಗುರಿ, ಬೆಳೆದು ಫಲ ಕೊಡಬಹುದು ಇಲ್ಲದೆಯೂ ಇರಬಹುದು. ಆದರೆ ವಿದ್ಯೆ ಎಂಬುದು ಎದೆಗೆ ಬಿದ್ದರೆ ಒಂದಲ್ಲಾ ಒಂದು ದಿನ ಒಂದಲ್ಲಾ ಒಂದು ರೀತಿಯಲ್ಲಿ ಖಂಡಿತಾ ಫಲ ಕೊಡುತ್ತದೆ.
ಇ] ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಸತ್ಯ ಮತ್ತು ಸಮಾನತೆಯನ್ನು ಕುರಿತ ನಿಮ್ಮ ಅನಿಸಿಕೆಗಳೇನು?
ಸತ್ಯ ಮತ್ತು ಸಮಾನತೆಗಾಗಿ ನಡೆದಿರುವ ಹೋರಾಟ ಇಂದಿನದಲ್ಲ. ಬಹಳ ಪ್ರಾಚೀನ ಕಾಲದಿಂದಲೂ ನಡೆದುಕೊಂಡೇ ಬರುತ್ತಿದೆ. ಇದಕ್ಕೆ ಪುರಾಣ, ರಾಮಾಯಣ, ಮಹಾಭಾರತ, ಇತಿಹಾಸ ಸಾಕ್ಷಿಯಾಗಿದೆ. ಸತ್ಯಕ್ಕಾಗಿ ಹೋರಾಟ ನಡೆಸಿದವರಲ್ಲಿ ಹರಿಶ್ಚಂದ್ರನ ಹೆಸರು
ಮೊದಲಿಗೆ ಬರುತ್ತದೆ. ಬುದ್ಧ-ಗಾಂಧೀ ನಮ್ಮ ಆದರ್ಶ ಪುರುಷರಾಗಿದ್ದಾರೆ. ಸಮಾನತೆಯೂ ಕೂಡ ಸತ್ಯದಂತೆಯೇ ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ, ನೆಮ್ಮದಿಯ ಜೀವನಕ್ಕೆ ಅತ್ಯಾವಶ್ಯಕವಾಗಿರುತ್ತದೆ. ಬುದ್ಧ, ಅಂಬೇಡ್ಕರ್, ಗಾಂಧೀಜಿ ಇವರ ತತ್ವಗಳಲ್ಲಿಯೂ ನಾವು ಕಾಣುವುದು
ಸಮಾನತೆಯನ್ನು, ಬಸವಣ್ಣನವರ ಮೂಲತತ್ವವೂ ಇದೇ ಆಗಿದೆ. ಸತ್ಯ ಮತ್ತು ಸಮಾನತೆ ಇಲ್ಲದಿದ್ದಲ್ಲಿ ಕೊಲೆ, ಸುಲಿಗೆ ದ್ವೇಷಕ್ಕೆ ಎಡೆಯಾಗುತ್ತದೆ. ಪರಿವಾರದಲ್ಲಿಯೇ ಆಗಲಿ, ದ್ವೇಷಕ್ಕೆ ಸಮಾಜದಲ್ಲಿಯೇ ಆಗಲಿ ನೆಮ್ಮದಿ ಇರುವುದಿಲ್ಲ. ಇದು ಅಂತರಂಗದ ಹೊಂದಾಣಿಕೆಯಿಂದ ಮಾತ್ರ ಸಾಧ್ಯ.
2. ಕವಿ ಸಿದ್ಧಲಿಂಗಯ್ಯನವರು ಹೇಳಿದ ಕತೆಯನ್ನು ಬರೆಯಿರಿ. ಕವಿ ಸಿದ್ಧಲಿಂಗಯ್ಯನವರು ಹೇಳಿದ ಕತೆಯೆಂದರೆ- ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು ಎಂಬ ನೀತಿಯನ್ನು ಹೇಳುವ ಕಾರುಣ್ಯ ಸಮತೆಯ ಕತೆಯನ್ನು ಹೇಳಿದ್ದಾರೆ. ಅದೆಂದರೆ- ಒಮ್ಮೆ ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಗುಡಿಯ ಕಟ್ಟಡ ಚಾವಣಿಯವರೆಗೂ ಮೇಲೇಳುತ್ತದೆ. ಆಗ ಇದ್ದಕ್ಕಿದ್ದಂತೆಯೇ ಮಂಚಮ್ಮದೇವಿ ಭಕ್ತನೊಬ್ಬನ ಮೇಲೆ ಆವಾಹನೆಯಾಗಿ ಏನ್ ಮಾಡ್ತಾಇದ್ದೀರಿ? ಎಂದು ಕೇಳುತ್ತಾಳೆ. ನಿನಗೊಂದು ಗುಡಿಕಟ್ತಾ ಇದ್ದೀವಿ, ತಾಯಿ ಎಂದು ಹೇಳಿದಾಗ 'ನಿಮಗೆಲ್ಲಾ ಮನೆ ಉಂಟಾ?' ಎಂದು ಕೇಳುತ್ತಾಳೆ. ಅದಕ್ಕೆ ಉತ್ತರವಾಗಿ ಅಲ್ಲೊಬ್ಬ 'ನನಗಿಲ್ಲತಾಯಿ' ಎಂದು ಹೇಳುತ್ತಾನೆ. ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೂ ನನಗೂ ಬೇಡ ಎಂದು ಮಂಚಮ್ಮತಾಯಿ ಹೇಳುತ್ತಾಳೆ.
ಅಂದಿನಿಂದ ಮಂಚಮ್ಮ 'ಮನೆ ಮಂಚಮ್ಮ' ಎಂದೇ ಪ್ರಸಿದ್ಧಳಾದ ತಾಯಿ ಚಾವಣಿ ಇಲ್ಲದ ಗುಡಿಯಲ್ಲಿ ಪೂಜಿತಳಾಗಿ ಎಲ್ಲರನ್ನೂ ಅನುಗ್ರಹಿಸುತ್ತಿದ್ದಾಳೆ.
3. ಸತ್ಯ-ಧರ್ಮ-ಸಮಾನತೆಯ ಬಗೆಗೆ ದೇವನೂರರು ಕೊಡುವ ದೃಷ್ಟಾಂತಗಳಾವುವು?
ಸತ್ಯ-ಧರ್ಮ-ಸಮಾನತೆಯ ಬಗೆಗೆ ದೇವನೂರರು ಕೊಡುವ ದೃಷ್ಟಾಂತಗಳೆಂದರೆ- ವಿಶ್ವಕ್ಕೆ ಬೆಳಕಾದ ಬುದ್ಧ, ಬಸವಣ್ಣ, ಅಂಬೇಡ್ಕರ್ ಮೊದಲಾದ ಸಮಾಜ ಸುಧಾರಕರ ಸದ್ಚಿಂತನೆಗಳ ಫಲವಾಗಿ ಸಮಾನತೆಯನ್ನು ಮೈಗೂಡಿಸಿಕೊಳ್ಳುವುದು ಅನಿವಾರ್ಯ. ದ್ವೇಷ ಅಸೂಯೆಗಳನ್ನು ತೊರೆದು ಸಮಷ್ಠಿಯ ಒಳಿತಿಗಾಗಿ ಸಾಮರಸ್ಯದ ನೆಲೆಯಲ್ಲಿ ಬದುಕನ್ನು ರೂಪಿಸಿಕೊಂಡವರಲ್ಲಿ ಸಮಾಜ ಸ್ವಾಸ್ಥ್ಯಗೊಳ್ಳಬಹುದೆಂಬುದು ದೇವನೂರರ ಅಭಿಪ್ರಾಯ. ಸಾಮಾಜಿಕ ಸಮಾನತೆಗೆ ಮೊದಲನೆಯ ಅಡ್ಡಿ ಮೌಢ್ಯವೇಆಗಿದೆ. ಮೌಢ್ಯ
ಮರೆಯಾಗುವವರೆಗೆ ಸಮಾನತೆ ಕನಸಾಗಿಯೇ ಉಳಿಯುತ್ತದೆ. ಹನ್ನೆರಡನೆಯ ಶತಮಾನದ ವಚನ ಆಂದೋಲನದ ಆ ಇಪ್ಪತ್ತೈದು ವರ್ಷಗಳು ಹುಡುಕಿದರೂ ಜಗತ್ತಿನಲ್ಲಿಯೇ ಕನರ್ಾಟಕದ ಈ ಮಾದರಿ ಬಹುಶಃ ಎಲ್ಲೂ ಸಿಗುವುದಿಲ್ಲವೆನೋ? ಈ ವಚನ ಧರ್ಮವನ್ನುಜಾತಿಯ ಬಚ್ಚಲಿನಿಂದ ಮೇಲೆತ್ತಿ ರಕ್ಷಿಸಿದರೆ ಜಗತ್ತಿಗೆ ಸಮಾನತೆಯ ಬೆಳಕಾಗಬಹುದೇನೋ, ಇದು ಜಾತಿಯಾದರೆ ಕೆಟ್ಟಜಾತಿ, ಧರ್ಮವಾದರೆ ಮಹೋನ್ನತಧರ್ಮ. ಇನ್ನು ಸತ್ಯ ಎಂಬುದು ಗಳಿಗೆಯಿಂದ ಗಳಿಗೆಗೆ ಎಡವುತ್ತಾ ಸತ್ಯ-ಸಮಾನತೆಯೆಡೆಗೆ ಹೋಗುವುದು. ಇದಕ್ಕೆ ದೃಷ್ಟಾಂತ ಮಹಾತ್ಮಾಗಾಂಧೀಜಿ.
ಈ] ಸಂದರ್ಭದೊಂದಿಗೆ ಸ್ವಾರಸ್ಯ ಬರೆಯಿರಿ.
1. ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ?
ಆಯ್ಕೆ :- ಈ ವಾಕ್ಯವನ್ನು ಶ್ರೀ ದೇವನೂರು ಮಹಾದೇವ ಅವರು ರಚಿಸಿರುವ 'ಎದೆಗೆ ಬಿದ್ದ ಅಕ್ಷರ' ಕೃತಿಯಿಂದ ಆಯ್ದ 'ಎದೆಗ ಬಿದ್ದ ಅಕ್ಷರ' ಎಂಬ ಗದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ :- ಗ್ರಾಮದೇವತೆ ಮಂಚಮ್ಮನಿಗೆ ಗುಡಿಕಟ್ಟಲು ಜನ ಪ್ರಾರಂಭಿಸಿದ ಸಂದರ್ಭದಲ್ಲಿ ಒಬ್ಬನ ಮೈ ಮೇಲೆ ಗ್ರಾಮದೇವತೆ ಮಂಚಮ್ಮ ಆವಾಹಿಸಿಕೊಂಡು ಬಂದು ಜನರಿಗೆ ಈ ಪ್ರಶ್ನೆಯನ್ನು ಕೇಳುತ್ತಾಳೆ.
ಸ್ವಾರಸ್ಯ :- ಸ್ವತಃ ತಮಗೆ ಮನೆ ಇಲ್ಲದಿದ್ದರೂ ದೇವರಿಗೆ ಮನೆ ಕಟ್ಟಲು ಹೊರಟ ಜನರ ಮುಗ್ಧತೆಯನ್ನು ಪ್ರಶ್ನಿಸುವ ಮೂಲಕ ಮಂಚಮ್ಮ ಕಾರುಣ್ಯ ಮತ್ತು ಸಮಾನತೆಯ ದೇವತೆಯಂತೆ ಕಾಣುವುದು ಈ ಮಾತಿನ ಸ್ವಾರಸ್ಯವಾಗಿದೆ.
2. ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ.
ಸಂದರ್ಭ :- ಗ್ರಾಮದೇವತೆ ಮಂಚಮ್ಮನಿಗೆ ಗುಡಿಕಟ್ಟಲು ಜನ ಪ್ರಾರಂಭಿಸಿದಾಗ, ಒಬ್ಬನ ಮೈ ಮೇಲೆ ಗ್ರಾಮದೇವತೆ ಮಂಚಮ್ಮ ಆವಾಹಿಸಿಕೊಂಡು ಬಂದು ಜನರೊಡನೆ ಮಾತನಾಡುವ ಸಂದರ್ಭದಲ್ಲಿ ಈ ಮಾತನ್ನು ಗ್ರಾಮದೇವತೆ ಮಂಚಮ್ಮ ಜನರಿಗೆ ಹೇಳುತ್ತಾಳೆ.
ಸ್ವಾರಸ್ಯ :- ತನ್ನ ಭಕ್ತರಿಗೆ ಮನೆ ಇಲ್ಲದ ಮೇಲೆ ನನಗೂ ಮನೆ ಬೇಡ ಎಂಬ ಮಂಚಮ್ಮದೇವತೆಯ ಮಾತು. ಕಾರುಣ್ಯ ಮತ್ತು ಸಮಾನತೆಯ ದ್ಯೋತಕವಾಗಿರುವುದು ಈ ಮಾತಿನ ಸ್ವಾರಸ್ಯವಾಗಿದೆ.
3. ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.
ಸಂದರ್ಭ :- ಲೇಖಕರಾದ ದೇವನೂರು ಮಹಾದೇವ ಅವರು ಡಾ. ಅಶೋಕ ಪೈ ಅವರ ಒಂದು ಸಂಶೋಧನಾ ಸತ್ಯಕತೆಯನ್ನು ಉದಾಹರಣೆ ನೀಡುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ :- ಯಾವುದೇ ಒಂದು ಜೀವಿಗೆ ಆಗುವ ದುಃಖ-ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ, ಎಲ್ಲಾ ಜೀವಿಗಳಲ್ಲೂ ಕಂಪನ ಉಂಟುಮಾಡುತ್ತಿರುತ್ತದೆ ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ.
4. ನಾವು ಮನುಷ್ಯರು.
ಸಂದರ್ಭ :- ಲೇಖಕರಾದ ದೇವನೂರು ಮಹಾದೇವ ಅವರು ಕೊಲೆ. ಸುಲಿಗೆ, ದ್ವೇಷ, ಅಸೂಯೆಗಳಿಂದ ಕ್ಷೊಭೆಗೊಂಡು ನರಳುತ್ತಿರುವ ಜಗತ್ತು ತನ್ನ ಆಳದ ಒಳ ಸಮಷ್ಟಿ ಮನಸ್ಸನ್ನು ಘಾಸಿಗೊಳಿಸುತ್ತಿದೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ :- ಜಾಗತೀಕರಣದ ಸಂದರ್ಭದಲ್ಲಿ ಮನುಷ್ಯರಾದ ನಾವು ನಮ್ಮೊಳಗೆ ಮೂಛರ್ಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ.
5. ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ.
ಸಂದರ್ಭ :- ಲೇಖಕರಾದ ದೇವನೂರು ಮಹಾದೇವ ಅವರು ಕೊಲೆ. ಸುಲಿಗೆ, ದ್ವೇಷ, ಅಸೂಯೆಗಳಿಂದ ಕ್ಷೊಭೆಗೊಂಡು ನರಳುತ್ತಿರುವ ಜಗತ್ತು ತನ್ನ ಆಳದ ಒಳ ಸಮಷ್ಟಿ ಮನಸ್ಸನ್ನು ಘಾಸಿಗೊಳಿಸುತ್ತಿದೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ :- ಸಮಷ್ಟಿ ಮನಸ್ಸಿನಲ್ಲಿ ಎಲ್ಲರೂ ಇರುವುದರಿಂದ ಕಾರುಣ್ಯ ಹಾಗೂ ಸರ್ವಸಮಾನತೆ ಮನೋಭಾವ ಮೂಡಿಸಿಕೊಂಡು ಬದುಕಬೇಕು ಎಂಬುದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.
ಉ] ಭಾಷಾಚಟುವಟಿಕೆ: ವಿರುದ್ಧಾರ್ಥಕ ಪದಗಳು :
1. ಒಳಿತು ಘಿ ಕೆಡುಕು. 2. ಸಮಷ್ಟಿ ಘಿ ವ್ಯಷ್ಟಿ 3. ಪುಣ್ಯ ಘಿ ಪಾಪ 4. ಬೆಳಕು ಘಿ ಕತ್ತಲು 5. ಧರ್ಮ ಘಿ ಅಧರ್ಮಭಾಗ - ಬಿ
1. ' ಜಾಣತನ ' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ :
ಎ) ತದ್ಧಿತಾಂತನಾಮ ಬಿ) ತದ್ಧಿತಾಂತಅವ್ಯಯ ಸಿ) ಕೃದಾಂತಭಾವನಾಮ ಡಿ) ತದ್ಧಿತಾಂತಭಾವನಾಮ
2. ' ಸಮಷ್ಟಿ ' ಪದದ ವಿರುದ್ಧಾರ್ಥಕ ರೂಪ :
ಎ) ಸಮಾನದೃಷ್ಟಿ ಬಿ) ವ್ಯಷ್ಟಿ ಸಿ) ಸಮದೃಷ್ಟಿ ಡಿ) ಸಮಪುಷ್ಟಿ
3. ಅವನು ಭೀಮನಿಗಿಂತ ಬಲಶಾಲಿಯಾದ ಹುಡುಗ ಈ ವಾಕ್ಯದಲ್ಲಿ ತದ್ಧಿತಾಂತಾವ್ಯಯ ಪದವಿದು :
ಎ) ಭೀಮನಿಗಿಂತ ಬಿ) ಅವನು ಸಿ) ಹುಡುಗ ಡಿ) ಬಲಶಾಲಿ
4. ' ವಿಜ್ಞಾನ ' ಪದದ ತದ್ಭವ ರೂಪ :
ಎ) ವಿನಂತಿ ಬಿ) ಜ್ಞಾನ ಸಿ) ಬಿನ್ನಾಣ ಡಿ) ವೈಜ್ಞಾನಿಕ
5. ' ಸಚ್ಚಿಂತನೆ ' ಪದವು ಈ ಸಂದಿಯ ಪದವಾಗಿದೆ :
ಎ) ಆಗಮಸಂಧಿ ಬಿ) ಶ್ಚುತ್ವಸಂಧಿ ಸಿ) ಅನುನಾಸಿಕಸಂಧಿ ಡಿ) ಜಶ್ತ್ವಸಂಧಿ.
6. ' ಬಳೆಗಾರ ' ಪದದ ಸ್ತ್ರೀಲಿಂಗ ತದ್ದಿತಾಂತ ಪದ :
ಎ) ಬಳೆವಂತೆ ಬಿ) ಬಳೆಗಾರುತಿ ಸಿ) ಬಳೆಗಾರ್ತಿ ಡಿ) ಬಳೆಮಾರುವವಳು.
7. ' ಅವಳಿಗೋಸ್ಕರ ನನ್ನ ಬದುಕನ್ನೇ ತ್ಯಾಗಮಾಡಿದೆ' ಈ ವಾಕ್ಯದಲ್ಲಿರುವ ತದ್ಧಿತಾಂತಾವ್ಯಯ ಪದ :
ಎ) ನನ್ನ ಬಿ) ತ್ಯಾಗಮಾಡು ಸಿ) ಬದುಕನ್ನೇ ಡಿ) ಅವಳಿಗೋಸ್ಕರ
8. 'ಬಿಳಿಕೂದಲು' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ :
ಎ) ತತ್ಪುರುಸಮಾಸ ಬಿ) ಕರ್ಮಧಾರಯಸಮಾಸ ಸಿ) ಅಂಶಿಸಮಾಸ ಡಿ) ದ್ವಂದ್ವಸಮಾಸ
9. ' ಮನೆ ' ಪದವು ಈ ವ್ಯಾಕರಣಾಂಶವಾಗಿದೆ :
ಎ) ಅಂಕಿತನಾಮ ಬಿ) ಅನ್ವರ್ಥನಾಮ ಸಿ) ಕೃದಂತನಾಮ ಡಿ) ರೂಢನಾಮ
10. ' ಗುಡಿಕಟ್ಟು ' ಪದವು ಈ ಸಮಾಸ ಪದವಾಗಿದೆ :
ಎ) ತತ್ಪುರುಸಮಾಸ ಬಿ) ಕ್ರಿಯಾಸಮಾಸ ಸಿ) ಅಂಶಿಸಮಾಸ ಡಿ) ದ್ವಂದ್ವಸಮಾಸ
11. ' ಗಳಿಗೆಗಳಿಗೆಗೆ ' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ :
ಎ) ದ್ವಿರುಕ್ತಿ ಬಿ) ಅನುಕರಣಾವ್ಯಯ ಸಿ) ಜೋಡಿಪದ ಡಿ) ನಾಮಪದ
12. ' ಮಹೋನ್ನತ ' ಪದವು ಈ ಸಂಧಿಗೆ ಉದಾಹರಣೆಯಾಗಿದೆ :
ಎ) ಆಗಮಸಂಧಿ ಬಿ) ಸವರ್ಣಧೀರ್ಘಸಂಧಿ ಸಿ) ಗುಣಸಂಧಿ ಡಿ) ಜಶ್ತ್ವಸಂಧಿ
[ ಉತ್ತರಗಳು : 1. ಸಿ. ತದ್ಧಿತಾಂತಭಾವನಾಮ 2. ಬಿ. ವೃಷ್ಟಿ 3. ಎ. ಭೀಮನಿಗಿಂತ 4. ಸಿ. ಬಿನ್ನಣ 5. ಡಿ. ಶ್ಚುತ್ವ್ವಸಂಧಿ 6. ಸಿ. ಬಳೆಗಾರ್ತಿ 7. ಡಿ. ಅವಳಿಗೋಸ್ಕರ 8. ಬಿ. ಕರ್ಮಧಾರೆಯ ಸಮಾಸ 9. ಡಿ. ರೂಢನಾಮ 10. ಬಿ. ಕ್ರಿಯಾಸಮಾಸ 11. ಎ. ದ್ವಿರುಕ್ತಿ 12. ಗುಣಸಂಧಿ ]
ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆ ಪದಕ್ಕೆ ಸಂಬಂಧ ಪದ ಬರೆಯಿರಿ :
1. ಬಿಡುಬಿಡು : ದ್ವಿರುಕ್ತಿ : : ಕೊಲೆಸುಲಿಗೆ :
2. ನಾಟಕಕಾರ : ತದ್ಧಿತಾಂತನಾಮ : : ಚೆಲುವಿಕೆ :
3. ಗುಡಿ : ರೂಢನಾಮ : : ಮೈಸೂರು :
4. ಹಣ : ಹಣವಂತ : : ಬಳೆ :
5. ಧರ್ಮ : ಅಧರ್ಮ : : ಪುಣ್ಯ :
6. ಅದಕ್ಕಿಂತ : ತದ್ಧಿತಾಂತಾವ್ಯಯ : : ಕಪ್ಪು : _
7. ಜೀವಸಂಕುಲ : ತತ್ಪುರುಷಸಮಾಸ : : ಆ ದೇವತೆ :
8. ಕವಿ : ಕಬ್ಬಿಗ : : ಶಿಲ್ಪಿ :
9. ಸಿರಿವಂತ : ಸಿರಿವಂತೆ : : ಕನ್ನಡಿಗ :
10. ಅಲ್ಲೊಬ್ಬ : ಲೋಪಸಂಧಿ : : ಗುಡಿಯನ್ನು :
[ ಉತ್ತರಗಳು : 1. ಜೋಡುನುಡಿ 2. ತದ್ಧಿತಾಂತಭಾವನಾಮ 3. ಅಂಕಿತನಾಮ 4. ಬಳೆಗಾರ 5. ಪಾಪ 6. ತದ್ಧಿತಾಂತಭಾವನಾಮ 7. ಗಮಕಸಮಾಸ 8. ಚಿಪ್ಪಿಗ 9. ಕನ್ನಡತಿ 10. ಆಗಮಸಂಧಿ ]

Comments
Post a Comment